the Ephemeral Me

Just like life - we appear, we disappear. So important to some; but for some, just passing by.

Personal blog. Tech blog here.

ಮಳೆ

· in journal, poem

ಚಳಿಗಾಳಿ ಸೋಕಿ ಸಣ್ಣ ನಡುಕ ಹರಡಿದ್ದು
ಮೊದಲ ಹನಿ ಮೈ ಸೋಕಿ ಮುದ ನೀಡಿದ್ದು
ಇನ್ನೆರಡು ನಿಮಿಷ ಈ ಸುಖವ ಸವಿದು
ಒಳಗೋಡಿ ಹೋಗುವ ಧೈರ್ಯ ನೀಡಿತ್ತು


ಆ ಕಾರ್ಮೋಡ ಕವಿದ ಆಗಸ
ನೀಡಿದ್ದರೂ ಮುನ್ಸೂಚನೆ
“ವರ್ಷಧಾರೆಯೇ ಸನಿಹವಿದೆ,
ತೋಯ್ದರೆ ಚಳಿಜ್ವರ ಖಾತರಿಯೇ”
ಈ ಜೀವ ಕೇಳನೇ,
ಹೊಸದಾದ ಆ ಭಾವ
ನೀಗಿಸಿತ್ತು, ಕಾಡಿದ್ದ
ಯಾವುದೋ ಅಭಾವ
ಅಂತೆಯೇ ಕೆಲವೇಳೆ
ಕಳೆದ್ಹೋದೆ
ಆಸರೆಗಳಿಂದೂರ
ಯೋಚನೆಗಳಿಂದೂರ
ನನ್ನಿಂದಲೂ ತುಸು ದೂರ

ಕಣ್ತೆರೆದು ಎದ್ದಾಗ
ಸಿಲುಕಿದ್ದೆನಾನೀ ಭೋರ್ಗರೆವ ಆಗಸದ
ಮದವೇರಿ ಘರ್ಜಿಸುವ
ಘನಮೋಡ ರಾಶಿಗಳ
ಮನಸ್ವೇಚ್ಛೆ ಜಲಧಾರೆಯ ಬೇಟೆಯೇ ಎಂಬಂತೆ

ತಿಳಿದಾಗ ಆಗಲೇ ತಡವಾಗಿ ಹೋಗಿತ್ತು,
ಮಳೆ ನಿಂತು ಹೋದಾಗ ಚಳಿಜ್ವರವು ಕಾದಿತ್ತು.